
ರಿಪ್ಪನ್‌ಪೇಟೆ : ಪಟ್ಟಣದ ಮಹಾಶಕ್ತಿ ಕೇಂದ್ರಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸುಂದರೇಶ್ ಕೆರೆಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಡಿ. ಮಲ್ಲಿಕಾರ್ಜುನ್ ಅವರನ್ನು ಆಯ್ಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಈ ನೇಮಕಾತಿಯನ್ನು ಹೊಸನಗರ ಮಂಡಲ ಅಧ್ಯಕ್ಷ ಎನ್. ಸತೀಶ್ ಪ್ರಕಟಿಸಿದ್ದು, ಪಕ್ಷದ ಜಿಲ್ಲಾ ಸಮಿತಿಯ ಸೂಚನೆ ಹಾಗೂ ಹಿರಿಯ ನಾಯಕರ ಮಾರ್ಗದರ್ಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ರಿಪ್ಪನ್‌ಪೇಟೆ ಹೋಬಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿದ್ದ ಎನ್. ಸತೀಶ್ ಅವರು ಹೊಸನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದೀಗ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ ಈ ನೇಮಕಾತಿ ನಡೆದಿದೆ ಎಂದು ಪಕ್ಷದ ವಲಯದಲ್ಲಿ ತಿಳಿಸಲಾಗಿದೆ.
ನೇಮಕಾತಿಯ ಬಳಿಕ ಪಟ್ಟಣದ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸುಂದರೇಶ್ ಕೆರೆಹಳ್ಳಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದರು. “ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯುವಕರನ್ನು ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡು, ಪಕ್ಷದ ತತ್ವ-ಸಿದ್ಧಾಂತಗಳನ್ನು ಮನೆಮನೆಗೂ ತಲುಪಿಸುವ ಕಾರ್ಯಕ್ಕೆ ಪ್ರಾಮುಖ್ಯತೆ ನೀಡಲಾಗುವುದು” ಎಂದು ಅವರು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಜಿ.ಡಿ. ಮಲ್ಲಿಕಾರ್ಜುನ್ ಅವರು ಮಾತನಾಡಿ, ಮಹಾಶಕ್ತಿ ಕೇಂದ್ರದ ಮಟ್ಟದಲ್ಲಿ ಬೂತ್‌ವಾರು ಸಂಘಟನೆ ಬಲಪಡಿಸುವುದು, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು ಹಾಗೂ ಜನಸೇವಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು. ಪಕ್ಷದ ಕಾರ್ಯಕರ್ತರ ಸಮನ್ವಯ ಮತ್ತು ಶಿಸ್ತುಬದ್ಧ ಕಾರ್ಯಪದ್ಧತಿಯ ಮೂಲಕ ಸಂಘಟನೆಯನ್ನು ಮಾದರಿಯಾಗಿಸುವುದಾಗಿ ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ, ಸುಧೀಂದ್ರ ಪೂಜಾರಿ, ರಾಜೇಶ್ ಬುಕ್ಕಿವರೆ, ಕುಮಾರ್ ಕಳಸೆ, ಮಹೇಶ್, ವೆಂಕಟರಮಣ ಚಿಕ್ಕಜೀನಿ, ಸುಧೀರ್ ಪಿ., ಮುರುಳಿ ಕೆರೆಹಳ್ಳಿ, ಕಗ್ಗಲಿ ಲಿಂಗಪ್ಪ, ಗಣೇಶ್, ನಾರಾಯಣ್, ಪದ್ಮಾ ಸುರೇಶ್, ನಾಗರತ್ನ ದೇವರಾಜ್, ರೇಖಾ ರವಿ, ದಾನಮ್ಮ, ಮಂಜುಳಾ ಕೆ. ತಾರ್ಜಿ, ವಿಮಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಪಕ್ಷದ ಭವಿಷ್ಯದ ಯೋಜನೆಗಳು, ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳಲಿರುವ ಜನಸಂಪರ್ಕ ಅಭಿಯಾನಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳ ಕುರಿತು ಚರ್ಚೆ ನಡೆಯಿತು. ಸಂಘಟನೆಯ ಬಲವರ್ಧನೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಮೂಲಕ ರಿಪ್ಪನ್‌ಪೇಟೆ ಮಹಾಶಕ್ತಿ ಕೇಂದ್ರವನ್ನು ಜಿಲ್ಲೆಯ ಮಟ್ಟದಲ್ಲಿ ಮಾದರಿಯನ್ನಾಗಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.
RIPPONPET..
Discover more from Prasarana news
Subscribe to get the latest posts sent to your email.
