
ಹೊಸನಗರ : ರಾಜ್ಯದ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಖಂಡಿಸಿ ದಿನಾಂಕ 17ರಂದು ಶನಿವಾರ ಹೊಸನಗರದಲ್ಲಿ ಹೊಸನಗರ ಬಿಜೆಪಿ ಮಂಡಲ ವತಿಯಿಂದ
ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ, ಮಾಜಿ ಸಚಿವ ಹಾಲಪ್ಪ ಹರತಾಳು ತಿಳಿಸಿದರು.
ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಂತೆ ಇಲ್ಲಿನ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕೈಗೊಂಬೆಯಂತೆ ಕುಣಿಯುತ್ತಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಅಶಾಂತಿ ನೆಲೆಸಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು.
ಇತ್ತೀಚೆಗೆ ಹೊಸನಗರದಲ್ಲಿ ನಡೆದ ಹಲವಷ್ಟು ಪ್ರಕರಣಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಇಲ್ಲಿನ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸುಳ್ಳು ಕೇಸ್ ದಾಖಲಿಸಿರುವುದು ಕಂಡು ಬರುತ್ತಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆಜ್ಞಾನುವರ್ತಿಯಾದ ಪೊಲೀಸ್ ಅಧಿಕಾರಿಗಳು ದುಂಡಾವರ್ತನೆ ಮಾಡುತ್ತಿದ್ದಾರೆ. ದ್ವೇಷ ರಾಜಕಾರಣದಿಂದ ಪ್ರಾಮಾಣಿಕ ಜನರಿಗೆ ಸುಳ್ಳು ಕೇಸುಗಳು ದಾಖಲಾಗುತ್ತಿದೆ ಎಂದರು.
ಸಾಗರ-ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಪೊಲೀಸ್ ಮತ್ತು ಅರಣ್ಯ ಇಲಾಖೆಯನ್ನು ಮನಸ್ಸಿಗೆ ಬಂದಂತೆ ಬಳಸಿಕೊಳ್ಳುತ್ತಿರುವುದು ಗುಟ್ಟಿನ ವಿಷಯವಲ್ಲ. ಬಡ ಬಗರ್ ಹುಕುಂ ರೈತರ ಮೇಲೆ ಕೇಸ್ ದಾಖಲಿಸುತ್ತಿರುವುದು ಖಂಡನೀಯ. ಬಡವರ ಪರ ಬಿಜೆಪಿ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದರು. ಬಳ್ಳಾರಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪೂರ್ವ ನಿಯೋಜಿತ ಗಲಾಟೆ,
ಹುಬ್ಬಳ್ಳಿ ಮಹಿಳಾ ಕಾರ್ಯಕರ್ತೆ ವಿವಸ್ತ್ರ ಪ್ರಕರಣ, ಬೆಂಗಳೂರು ಕೋಗಿಲುನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರಿಗೆ ಮನೆ ಹಂಚಿಕೆ, ರಾಜ್ಯ ಸರ್ಕಾರದ ಹಿಂದೂ ದ್ವೇಷಿ ಮತ್ತು ಮುಸ್ಲಿಂ ತುಷ್ಟಿಕರಣದ ನೀತಿ ಹೀಗೆ ಹತ್ತು ಹಲವು ದುರಾಡಳಿತದ ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಪ್ರತಿಭಟನೆಯಲ್ಲಿ ಸಂಸದ ಬಿ. ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ,
ಡಿ. ಎಸ್. ಅರುಣ್, ಜಗದೀಶ್, ಟಿ. ಡಿ. ಮೇಘರಾಜ್, ಶಿವರಾಜ್ ಮತ್ತಿತರರು ಹಾಜರಿರುವರು ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ
ಎಂ. ಎನ್. ಸುಧಾಕರ್, ಜೆಡಿಎಸ್ ಪಕ್ಷದ ಅಧ್ಯಕ್ಷ ವರ್ತೇಶ್,
ಪದ್ಮನಿ ರಾವ್, ಉಮೇಶ್ ಕಂಚುಗಾರ್,ಆರ್.ಟಿ.ಗೋಪಾಲ್, ಎನ್. ಆರ್. ದೇವಾನಂದ್, ಕೆ.ವಿ. ಕೃಷ್ಣಮೂರ್ತಿ, ಆಲವಳ್ಳಿ ವೀರೇಶ್, ಮೆಣಸೆ ಆನಂದ್, ಮಂಡಾನಿ ಮೋಹನ್ ಇದ್ದರು.
B J P PROTEST ...
Discover more from Prasarana news
Subscribe to get the latest posts sent to your email.
