
ಹೊಸನಗರ: ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಎಫ್ ಡಿ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಗಳಲ್ಲಿ ಜಾಗೃತಿ ಸಭೆ ನಡೆಸಬೇಕು. ಎಲ್ಲಾ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಸೂಚಿಸಿದರು.
ಭಾನುವಾರ ಶಾಸಕರ ಗೃಹದಲ್ಲಿ ಆನ್‌ಲೈನ್ ಸಭೆ ನಡೆಸಿ ಮಂಗನಕಾಯಿಲೆ ಮತ್ತದರ
ಸಮಸ್ಯೆಯ ಕುರಿತು ಚರ್ಚೆ ನಡೆಸಿದರು.
ಮಲೆನಾಡು ಪ್ರದೇಶದಲ್ಲಿ ಜನರು ಕಾಡಿನ ಪ್ರದೇಶಕ್ಕೆ ಹೋಗಿ ಬರಬೇಕಾಗುತ್ತದೆ. ಸೊಪ್ಪು, ದರಗು, ಕಟ್ಟಿಗೆ ತರಲು ತರಲು ಕಾಡಿಗೆ ಹೋಗಲೇಬೇಕಾದಂತಹ ಪರಿಸ್ಥಿತಿ ಇದೆ. ಆಗ ಉಣ್ಣೆಗಳು ಮೈಗೆ ಹತ್ತಬಹುದು, ಜಾನುವಾರುಗಳ ಮೈಯಿಂದಲೂ ಬರಬಹುದು. ಇದರಿಂದ ಕೆಎಫ್‌ಡಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಜನರಿಗೆ ಸ್ಪಷ್ಟ ಅರಿವು ಇಲ್ಲ. ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮೂಲಕ ಜನಜಾಗೃತಿ ಸಭೆ ನಡೆಸಬೇಕು. ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿ, ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೊನಲೆ ಗ್ರಾಮದಲ್ಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನದ 24 ಗಂಟೆ ಲಭ್ಯವಾಗುವಂತೆ
ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಳೆದ ವರ್ಷ ಸಂಪೆಕಟ್ಟೆ ಗ್ರಾಮದಲ್ಲಿ ಒಬ್ಬ ಯುವತಿ ಕೆಎಫ್‌ಡಿ ಯಿಂದ ಮೃತಪಟ್ಟಿರುವ ಘಟನೆಯನ್ನು ನೆನಪಿಸಿದ ಅವರು, ಅಂತಹ ಘಟನೆಗಳು ಯಾವ ಕಾರಣಕ್ಕೂ ನಡೆಯಬಾರದು. ಅಧಿಕಾರಿಗಳು ನಿರ್ಲಕ್ಷಿಸಬಾರದು. ಎಲ್ಲ 'ಇಲಾಖೆ ಅಧಿಕಾರಿಗಳು ಒಗ್ಗೂಡಿ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ಆಸ್ಪತ್ರೆಗೆ ಬನ್ನಿ: ಜನರಿಗೆ ಜ್ವರ ಹಾಗೂ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬರಬೇಕು. ಅಲ್ಲಿ ಅವರ ರಕ್ತ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಕೂಡದು ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನ ಮುಗಿದ ನಂತರ ತಾವೇ ಖುದ್ದಾಗಿ ಸೊನಲೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕನ ನಡೆಸುವುದಾಗಿ ತಿಳಿಸಿದರು.
ಪಿಡಿಒ ಹೆಚ್ಚು ಗಮನ: ಮಂಗನಕಾಯಿಲೆ ಸೋಂಕು ಇರುವ ಪ್ರದೇಶದಲ್ಲಿನ ಗ್ರಾಮ ಪಂಚಾಯಿತಿ ಪಿಡಿಒಗಳು ಹೆಚ್ಚಿನ ಗಮನ ನೀಡಬೇಕು. ಸ್ಥಳೀಯ ಸದಸ್ಯರು, ಪ್ರಮುಖರನ್ನು ಒಟ್ಟೂಗೂಡಿಸಿ ಸಭೆ ನಡೆಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ತಹಸೀಲ್ದಾರ್, ತಾಲ್ಲೂಕು ವೈದ್ಯಾಧಿಕಾರಿಗಳು ಅರಣ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ARAGA JNANENDRA
Discover more from Prasarana news
Subscribe to get the latest posts sent to your email.
