
ರಿಪ್ಪನ್ ಪೇಟೆ: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕ್ಷಮತೆ, ಸೇವಾ ಲಭ್ಯತೆ ಮತ್ತು ಸಿಬ್ಬಂದಿ ನಿಯೋಜನೆಯ ಸ್ಥಿತಿಯನ್ನು ಪರಿಶೀಲಿಸಲು ಸೋಮವಾರ ಹೊಸನಗರ ತಾಲೂಕು ತಹಶೀಲ್ದಾರ್ ಭರತ್ ರಾಜ್ ದಿಡೀರ್ ಭೇಟಿ ನೀಡಿದರು.
ತಹಶೀಲ್ದಾರ್ ಅವರು ಮೊದಲು ಹೊರರೋಗಿಗಳೊಂದಿಗೆ ಮಾತನಾಡಿ ಚಿಕಿತ್ಸೆ, ಔಷಧಿ ಲಭ್ಯತೆ ಹಾಗೂ ತುರ್ತು ಸೇವೆಗಳ ಬಗ್ಗೆ ಪ್ರತಿಕ್ರಿಯೆ ಸಂಗ್ರಹಿಸಿದರು. ನಂತರ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ದೈನಂದಿನ ಕಾರ್ಯವೈಖರಿ, ಸಿಬ್ಬಂದಿ ಹಾಜರಿ, ಸೌಲಭ್ಯಗಳ ಬಳಕೆ ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಒಳರೋಗಿಗಳ ವಾರ್ಡ್‌ಗಳನ್ನೂ ಪರಿಶೀಲಿಸಿ ಚಿಕಿತ್ಸೆ ಗುಣಮಟ್ಟ ಹಾಗೂ ನೀಡಲಾಗುತ್ತಿರುವ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಮಾಧ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ಭರತ್ ರಾಜ್,
“ಸರ್ಕಾರಿ ಆಸ್ಪತ್ರೆಯ ಸೇವೆಗಳು ಒಟ್ಟಾರೆ ತೃಪ್ತಿಕರವಾಗಿದ್ದರೂ ರಾತ್ರಿ ವೇಳೆ ಚಿಕಿತ್ಸೆಯ ಕುರಿತ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು,” ಎಂದು ಮಾಹಿತಿ ನೀಡಿದರು.
ರಾತ್ರಿ ವೇಳೆಯ ಅಪಘಾತ ಪ್ರಕರಣಗಳಲ್ಲಿ ಅನುಭವ ಹೊಂದಿದ ವೈದ್ಯರ ಲಭ್ಯತೆಯ ಕುರಿತು ಕೇಳಿದ ಪ್ರಶ್ನೆಗೆ,
“ಮುಂದಿನ ದಿನಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚಿಸಲಾಗುತ್ತದೆ,” ಎಂದರು.
ಈ ಪರಿಶೀಲನಾ ಭೇಟಿಯಲ್ಲಿ ವೈದ್ಯಾಧಿಕಾರಿ ಡಾ. ಆಂಜನೇಯ್ ಕುಮಾರ್, ಉಪ ತಹಶೀಲ್ದಾರ್ ಗೌತಮ್ ಹಾಗೂ ರಾಜಸ್ವ ನಿರೀಕ್ಷಕ ಅಫ಼್ರೋಜ್ ಅಹಮದ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಗ್ರಾಮಪಂಚಾಯತ್ ಸದಸ್ಯ ನಿರೂಪ್ ಕುಮಾರ್, ಅಣ್ಣಪ್ಪ, ಹಾಗೂ ಸಿಬ್ಬಂದಿಗಳು ಕಾಂಗ್ರೆಸ್ ಮುಖಂಡ ಗಾಳಿ ಬೈಲು ಕಲೀಲ್ ಶರೀಫ್ ಇನ್ನಿತರರಿದ್ದರು.
RIPPONPET NEWS..
