
ರಿಪ್ಪನ್‌ಪೇಟೆ:ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಪತ್ತೆಯಾಗಿದ್ದು, ಪಿಎಸ್ಐ ರಾಜುರೆಡ್ಡಿ ನೇತೃತ್ವದ ಪೊಲೀಸ್ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ 8 ಕ್ವಿಂಟಾಲ್ 76 ಕೆಜಿ ಅಕ್ಕಿ ವಶಕ್ಕೆ ಸಿಕ್ಕಿದೆ. ಈ ಸಂಬಂಧ ಕೆಂಚನಾಲ ಗ್ರಾಮದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರ ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಕೆಲವರು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ, ಸಾಗರ ರಸ್ತೆಯ ಕಾಲೇಜು ಮುಂಭಾಗದ ಮೀನಾಕ್ಷಮ್ಮ ಎಂಬುವವರ ಮನೆಯಲ್ಲಿ ದಾಳಿ ನಡೆಸಿದಾಗ ಅಕ್ರಮ ಸಂಗ್ರಹ ಪತ್ತೆಯಾಯಿತು.
ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ರಶ್ಮಿ ಹಾಲೇಶ್ ತತ್ಕ್ಷಣ ಹೊಸನಗರ ತಾಲ್ಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು. ಸ್ಥಳಕ್ಕೆ ಧಾವಿಸಿದ ಆಹಾರ ನಿರೀಕ್ಷಕರಾದ ನಾಗರಾಜ್ ಹಾಗೂ ಬಾಲರಾಜ್ ಅವರು ಅಕ್ಕಿಯ ಪ್ರಮಾಣ ಪರಿಶೀಲಿಸಿ ಪ್ರಾಥಮಿಕ ತನಿಖೆಯ ಬಳಿಕ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದರು.
ಈ ಪ್ರಕರಣದ ಹಿಂದೆ ಸಂಘಟಿತ ಜಾಲವಿರುವ ಸಾಧ್ಯತೆಗಳನ್ನು ಪೊಲೀಸರು ತಳ್ಳಿಹಾಕಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಪಡಿತರ ಅಕ್ಕಿಯ ಕಳ್ಳಸಾಗಣೆ ಮತ್ತು ಕಾಳ ಸಂತೆಯಲ್ಲಿ ವ್ಯಾಪಾರ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ರಿಪ್ಪನ್‌ಪೇಟೆ ಘಟನೆಯೂ ದೊಡ್ಡ ಜಾಲದ ಭಾಗವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ, ಉಮೇಶ್, ಪರಮೇಶ್, ಸಂತೋಷ್ ಹಾಗೂ ಅವಿನಾಶ್ ಸಹಕರಿಸಿದರು.
PADITHARA AKKI..
Discover more from Prasarana news
Subscribe to get the latest posts sent to your email.
