
ಹೊಸನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪನೆಗೊಂಡ ಬಳಿಕ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ ಅಲ್ಲದೆ ಕ್ಷೇತ್ರದ ಶಾಸಕರು ಸ್ವೇಚ್ಛಾಚಾರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಆರೋಪಿಸಿದರು.
ತಾಲೂಕು ಕಛೇರಿ ಆವರಣದಲ್ಲಿ ಬಿಜೆಪಿ ಮಂಡಲ ಶನಿವಾರ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅವರು ಮಾತನಾಡಿ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಅಭಿವೃದ್ಧಿಯ ವಿಷಯದಲ್ಲಿ ಎಡವಿದ್ದಾರೆ. ಬಡವರು, ರೈತರ ಪರ ಕಾಳಜಿ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ಬಗರ್‌ಹುಕುಂ ಸಾಗುವಳಿ ಜಮೀನು ತೆರವುಗೊಳಿಸಿದ್ದಷ್ಟೇ ಈ ವರೆಗಿನ ಸಾಧನೆಯಾಗಿದೆ. ಬಿಜೆಪಿ ಕರ‍್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಸ್ಥಳೀಯ ಶಾಸಕರು ಅಧಿಕಾರಿವರ್ಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲ ಅಧಿಕಾರಿಗಳು ಸಹಾ ಶಾಸಕರ ಹಿಂಬಾಲಕರAತೆ ವರ್ತಿಸುತ್ತಿದ್ದಾರೆ. ಇದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶಾಸಕರ ಹಿಂಬಾಲಕರು ಸರಕಾರಿ ಕಛೇರಿಕಗಳಲ್ಲಿಯೇ ಠಿಕಾಣ ಹೂಡಿಕೊಂಡಿದ್ದು, ಜನಸಾಮಾನ್ಯರು ಅಸಹ್ಯ ಪಡುವಂತಾಗಿದೆ ಎಂದು ಕಿಡಿ ಕಾರಿದರು.
ತಹಸೀಲ್ದಾರ್, ತಾಲೂಕು ಪಂಚಾಯಿತಿ ಕರ‍್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆ ಎಂಜಿನಿಯರ್, ಶಿಕ್ಷಣ ಇಲಾಖೆಯ ಅಧಿಕಾರಿಗಳ ಹುದ್ದೆಗಳು ಖಾಲಿ ಉಳಿದಿವೆ. ಜನಸಾಮಾನ್ಯರು ಅಹವಾಲು ಸಲ್ಲಿಸಲು ಕಛೇರಿಗೆ ಬಂದರೆ ಕೇಳುವವರಿಲ್ಲದಂತಾಗಿದೆ. ತಾಲೂಕಿನ ಬಹುತೇಕ ರಸ್ತೆಗಳು ಹೊಂಡ ಬಿದ್ದರೂ ಮುಚ್ಚುವವರಿಲ್ಲದಂತಹ ಸ್ಥಿತಿ ತಲುಪಿವೆ ಎಂದು ಟೀಕಿಸಿದರು.
ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಮಾತನಾಡಿ, ರಾಜ್ಯ ಸರಕಾರ ಬಿಪಿಎಲ್ ಕಾರ್ಡ್ಗಳನ್ನು ವಜಾ ಮಾಡುವ ಮೂಲಕ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿರುವ ಶಾಸಕರ ಹೇಳಿಕೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್.ದೇವಾನಂದ, ಉಮೇಶ ಕಂಚುಗಾರ್, ಹಾಲಗದ್ದೆ ಉಮೇಶ, ವೀರೇಶ ಆಲುವಳ್ಳಿ, ಆರ್‌ಟಿ.ಗೋಪಾಲ, ಸುರೇಶ್ ಸ್ವಾಮಿರಾವ್, ನಾಗಾರ್ಜುನ ಸ್ವಾಮಿ, ಶ್ರೀಪತಿರಾವ್, ಮಂಡಾನಿ ಮೋಹನ, ಅಭಿಲಾಷ್, ಮಂಜುನಾಥ್ ಸಂಜೀವ, ನಾಗರತ್ನ ದೇವರಾಜ್, ಶಶಿಕಲಾ, ಸುಮಾ ಸುರೇಶ್, ಎನ್.ವೈ.ಸುರೇಶ್,ಅಭಿಲಾಷ, ಬಂಕ್ರಿಬೀಡು ಮಂಜುನಾಥ್, ಪುರುಷೋತ್ತಮ ಶಾನುಭೋಗ್, ಮನೋಧರ, ನಗರ ನಿತಿನ್ ಮತ್ತಿತರರು ಇದ್ದರು..
HARATHALU HALAPPA..
