
ಹೊಸನಗರ: 30 ವರ್ಷದಿಂದ ನೆನೆಗುದಿಗೆ ಬಿದ್ದು ಗ್ರಾಮಸ್ಥರನ್ನು ಆತಂಕಕ್ಕೆ ದೂಡಿರುವ ಪಹಣಿಯಲ್ಲಿ ದಾಖಲಾದ ಸೂಚಿತ ಅರಣ್ಯ ಸಮಸ್ಯೆ ಶೀಘ್ರ ಬಗೆಹರಿಯುವ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ಕರಿಮನೆ ಗ್ರಾಮಸ್ಥರ ನಿಯೋಗ ಜೊತೆ, ಜಿಲ್ಲಾಧಿಕಾರಿ, ಅರಣ್ಯ ಅಧಿಕಾರಿ ಸಭೆ ನಡೆಸಿದ ಅವರು ಸೂಚಿತ ಅರಣ್ಯ ದಾಖಲು ರದ್ದುಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಿದರು.
ಧನದ ಮುಫತ್ತು ಆಗಿದ್ದ ಜಮೀನಿನ ಪಹಣಿಯ ಕಾಲಂ 9 ರಲ್ಲಿ ಏಕಾಏಕಿ ಸೂಚಿತ ಅರಣ್ಯ ಎಂದು ದಾಖಲಾದ ಬಗ್ಗೆ ಹಲವರು ನ್ಯಾಯಾಲಯಕ್ಕೆ ಹೋಗಿದ್ದರು. ಅಲ್ಲಿ ರೈತರ ಪರವಾಗಿ ಬಂದ ಆದೇಶದ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಹಲವು ಬಾರಿ ಹಗಲು ರಾತ್ರಿ ಧರಣಿ ನಡೆಸಿದರು ಕೂಡ ಪ್ರಯೋಜನವಾಗದಿರುವ ಬಗ್ಗೆ ಕೂಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಗಮನಕ್ಕೆ ತರಲಾಯಿತು. ಅಲ್ಲದೇ ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಸೂಚನೆ ನೀಡಿದ್ದರು ಕೂಡ ಪ್ರಯೋಜನವಾಗಿಲ್ಲ. ಕರಿಮನೆ ಗ್ರಾಮಸ್ಥರು ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ ಎಂಬುದರ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಬಳಿಕ ಕರಿಮನೆ ಗ್ರಾಮಸ್ಥರಿಗೆ ನ್ಯಾಯ ಒದಗಿಸಲು ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಸ್ಥಳ ಮಹಜರು ನಡೆಸಿ, ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು.
ಸಿಸಿಎಫ್ ಹನುಮಂತಪ್ಪ, ಡಿಎಫ್ಒ ಮೋಹನಕುಮಾರ್, ಎಸಿಎಫ್ ಮೋಹನಕುಮಾರ್, ಸಾಗರ ಎಸಿಎಫ್ ರವಿ, ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಮಲ್ಲನಗೌಡ್ರು ನಗರ, ಅನಿಲಕುಮಾರ್ ಎಸ್, ರವಿಕುಮಾರ್, ಅಣ್ಣಪ್ಪ ತಹಶೀಲ್ದಾರ್ ರಶ್ಮಿ ಹಾಲೇಶ್, ಕರಿಮನೆ ಭಾಗದ ಪ್ರಮುಖರಾದ ಎನ್.ವೈ.ಸುರೇಶ್, ಬಿ.ಟಿ.ಧರ್ಮಪ್ಪ ಗೌಡ, ಗಿರೀಶ್ ಬಾವಿಕಟ್ಟೆ, ಸತೀಶ ಹೊಸಬೀಡು, ಗಣೇಶ ಹಲಸಿನಹಳ್ಳಿ ಭಾಗವಹಿಸಿದ್ದರು.
ARAGA JNANENDRA
