
ಶಿವಮೊಗ್ಗ: ಇಂಗ್ಲಿಷ್ ಭಾಷೆಯ ಅತಿಯಾದ ವ್ಯಾಮೋಹದಿಂದ ಇವತ್ತು ಕನ್ನಡಕ್ಕೆ ಸವಾಲಿದೆ. ಒಂದು ಭಾಷೆ ನಾಶವಾಗುವುದು ಅಂದರೆ ಅಲ್ಲಿಯ ಸಂಸ್ಕೃತಿಯ ನಾಶವಾದಂತೆ. ಭಾಷೆಯನ್ನು ಬಂಡವಾಳವಾಗಿ ನೋಡಬಾರದು ಎಂದು ಸಾಹಿತಿ ಸದಾಶಿವ ಸೊರಟೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ದೇಶ ನಾಶ ಮಾಡುವ ಉದ್ದೇಶವಿದ್ದರೆ ಅಲ್ಲಿಯ ಭಾಷೆ ನಾಶಪಡಿಸಬೇಕು ಎಂದು ಮೆಕಾಲೆ ಹೇಳುತ್ತಾನೆ. ಭಾಷೆ ಯಾವಾಗಲೂ ಒಂದು ಸಂಸ್ಕೃತಿಯ ನಿರ್ಮಿಸುತ್ತಾ ಹೋಗುತ್ತದೆ. ಒಂದು ಭಾಷೆಯ ನಾಶವೆಂದರೆ ಅಲ್ಲಿನ ಸಂಸ್ಕೃತಿ, ಜನಪದ, ಜನ, ನೆಲ- ಜಲ ಎಲ್ಲವೂ ನಾಶವಾದಂತೆ. ಇದನ್ನು ಇಂದಿನ ಯುವ ಜನತೆ ಅರ್ಥಮಾಡಿಕೊಳ್ಳಬೇಕು. ಭಾರತೀಯ ಭಾಷೆಗಳಲ್ಲಿ ತಮಿಳಿಗೆ ಕನ್ನಡ ನಾಡಿನಲ್ಲಿ ತುಳುವವರಿಗೆ ಇದ್ದ ಭಾಷಾ ಪ್ರೇಮ ಕನ್ನಡಿಗರಿಗಿಲ್ಲ. ತುಳು ಭಾಷೆಯಲ್ಲಿ ಮಾತನಾಡಿದರೆ ಉದ್ಯೋಗ ಸಿಗುವುದಿಲ್ಲ. ಹಣ, ಆಸ್ತಿ ಸಿಗುವುದಿಲ್ಲ. ಆದರೆ ತುಳುವವರು ಅಲ್ಲಿಯ ಜನರೊಂದಿಗೆ ಆ ಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ. ಕನ್ನಡವನ್ನು ಸರಿಯಾಗಿ ಕಲಿಯದಿದ್ದರೆ ಯಾವ ಭಾಷೆಯನ್ನು ಸರಿಯಾಗಿ ಕಲಿಯಲು ಸಾಧ್ಯವಿಲ್ಲ.

ಇವತ್ತು ಹಿಂದಿನಗಿಂತಲೂ ಹೆಚ್ಚು ವರ್ತಮಾನದಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಒಂದುಕಡೆ ಭಾಷೆಯಾದರೆ ಇನ್ನೊಂದು ಭಾಷೆಯ ಮೂಲಕ ಬರುವ ಭಾವನೆಗಳನ್ನು ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸಂಸ್ಕೃತಿ ಎಂಬುದೊಂದು ಇಲ್ಲ. ಹಲವು ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ. ಹಾಗಾಗಿ ಕನ್ನಡವೆಂದರೆ ಹಲವು ಭಾಷೆಗಳನ್ನು ಒಳಗೊಂಡಿರುವ ಒಂದು ಸಂಸ್ಕೃತಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ಅಣ್ಣಪ್ಪ ಮಳೀಮಠ್ ಮಾತನಾಡಿ ಕನ್ನಡದೊಳಗೆ ಬಹುತ್ವದ ಆಶಯಗಳಿವೆ. ಅಲ್ಲಿ ಜನಸಾಮಾನ್ಯರ ನೋವು ನಲಿವುಗಳಿವೆ. ಕನ್ನಡವೆಂದರೆ ಒಂದು ಸಂಸ್ಕೃತಿ, ಜನರ ಜೀವನವಿಧಾನ. ಕನ್ನಡಕ್ಕೆ ತನ್ನನ್ನು ಉಳಿಸಿಕೊಳ್ಳುವ ಶಕ್ತಿಯಿದೆ. ಅದನ್ನು ಯಾರೂ ಉಳಿಸಬೇಕಾದ ಶಕ್ತಿಯಿದೆ. ಭಾಷಾ ಸಮಸ್ಯೆಯೆಂಬುದು ಕನ್ನಡದ್ದು ಮಾತ್ರವಲ್ಲ ಅದೊಂದು ಅಂತಾರಾಷ್ಟ್ರೀಯ ಸಮಸ್ಯೆ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತಾ ನಮ್ಮ ಭಾಷೆಯಲ್ಲಿ ಬೇರೂರಿ ಬೆಳೆಯುವುದನ್ನು ಕಲಿಯಬೇಕು. ಈ ಹೊತ್ತಿಗೆ ಭಾಷೆಯ ವಿಚಾರದಲ್ಲಿ ಯುವಜನತೆಗೆ ಬಹುದೊಡ್ಡ ಜವಾಬ್ದಾರಿಯಿದೆ. ಅದೊಂದು ಸಾಮಾಜಿಕ ಹೊಣೆಗಾರಿಕೆ ಎಂದು ಪರಿಗಣಿಸಿಕೊಂಡು ಮುನ್ನಡೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ.ಜಿ ಚನ್ನಪ್ಪ ಮಾತನಾಡಿ ಜನಪದ ದಾಟಿಯಲ್ಲಿರುವ ಕಿನ್ನರಿ ಜೋಗಿ ಪದಗಳು ಇಂದು ಅಳಿವಿನಂಚಿನಲ್ಲಿವೆ. ಇವುಗಳಿಗೆ ಅಕಾಡೆಮಿಕ್ ಜನಪ್ರಿಯತೆಯನ್ನು ತಂದುಕೊಡಬೇಕು. ಜನಪ್ರಿಯತೆಯನ್ನು ಬೆನ್ನುಬಿದ್ದ ಕಲಾವಿದರು ಅನಿವಾರ್ಯವಾಗಿ ಇಂದು ಜನರ ಎದುರಿಗೆ ಜೋಗಿ ಪದಗಳನ್ನ ಬಿಟ್ಟು ಜನರಿಗೆ ಬೇಕಾದ ಪದಗಳನ್ನು ಹಾಡುವ ಕಡೆಯಲ್ಲಿ ಸಾಗುತ್ತಿದ್ದಾರೆ. ಆದರೆ ಮೂಲ ಪದಗಳನ್ನ ಉಳಿಸಿಕೊಂಡು ಮುನ್ನಡೆಯುವ ಅನಿವಾರ್ಯತೆ ಇದೆ. ಮೌಖಿಕ ಸಾಹಿತ್ಯದಲ್ಲಿ ಅಗಾಧವಾದ ಜೀವನ ಧಾತುಗಳಿವೆ. ಇಂದು ಎಲ್ಲಾ ಭಾಷೆಗಳು, ಜನಪದಗಳು ಬೇಕು. ಮೂಲವನ್ನು ಉಳಿಸುವ ಮತ್ತು ಅದನ್ನು ಮುನ್ನಡೆಸುವ ಹೊಣೆಗಾರಿಕೆ ಇಂದು ಯುವಜನರ ಮೇಲಿದೆ ಎಂದು ಹೇಳಿದರು. ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಮಂಜುನಾಥ ಎಂ.ಎಂ, ಪ್ರೊ. ಶಶಿಧರ, ಡಾ. ವಿದ್ಯಾಮರಿಯ ಜೋಸೆಫ್, ಡಾ. ಸೀಮಾ ಎಸ್ ಆರ್, ಪವಿತ್ರಾ ಕೆಪಿ, ಶ್ವೆತಾ ಇದ್ದರು. ಕು. ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿ, ವಾಣಿಶ್ರೀ ಸ್ವಾಗತಿಸಿ, ಪುನೀತ್ ಅತಿಥಿ ಪರಿಚಯಿಸಿದರು. ಕಾರ್ಯಕ್ರಮದ ನಂತರ ಬಟ್ಟೆಮಲ್ಲಪ್ಪದ ಶ್ರೀನಿವಾಸ್ ಮತ್ತು ಚಂದ್ರಪ್ಪ ತಂಡದಿಂದ ಕಿನ್ನರಿ ಜೋಗಿ ಪದಗಳನ್ನು ಹಾಡಿದರು. ಡಾ. ಗಣೇಶ ಆರ್ ಕೆಂಚನಾಲ ನಿರ್ದೇಶನದ ಕುವೆಂಪು ಅವರ ಜಲಗಾರ ನಾಟಕವನ್ನು ಪ್ರದರ್ಶಿಸಲಾಯಿತು.
SHIMOGA:KANNADA RAJYOTSAVA
