
ಹೊಸನಗರ: ಕರಾವಳಿ ಮದ್ಯ ಕರ್ನಾಟಕದ ಅಗತ್ಯ ಉತ್ಪನ್ನಗಳ ಪ್ರಮುಖ ಸಂಪರ್ಕ ಕೊಂಡಿ ಹುಲಿಕಲ್ ಘಾಟ್ ಮಾರ್ಗದಲ್ಲಿ ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿತ ಕಂಡು ಬಂದಿದ್ದು ಸಂಚಾರಕ್ಕೆ ಆತಂಕ ತಂದೊಡ್ಡಿದೆ.
ಹುಲಿಕಲ್ ಘಾಟ್ ಮಾರ್ಗದ ಚಂಡಿಕಾಂಬ ದೇವಸ್ಥಾನದ ಕೆಳಭಾಗದಲ್ಲಿ ಬರುವ ಹೇರ್ ಪಿನ್ ತಿರುವಿನಲ್ಲಿ ಬಾರೀ ಪ್ರಮಾಣದಲ್ಲಿ ಮಣ್ಣು ಕುಸಿತ ಕಂಡು ಬಂದಿದೆ. ಈ ಹಿಂದೆ ತಡೆಗೋಡೆ ಕಾಮಗಾರಿ ನಡೆದಿದೆಯಾದರೂ.. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಡೆಗೋಡೆಗೆ ಹಾಕಿದ ಮಣ್ಣು ಸೇರಿದಂತೆ ಕೆಳಭಾಗದವರೆಗೂ ಮಣ್ಣು ಕುಸಿದಿದ್ದು ಭಯದ ವಾತಾವರಣ ಸೃ಼ಷ್ಟಿಸಿದೆ.
ರಸ್ತೆ ಕೆಳಭಾಗ ಕೊರೆತ:
ಹೇರ್ ಪಿನ್ ತಿರುವಿನ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ ಕಾಂಕ್ರೀಟ್ ಸೇರಿದಂತೆ ಒಳಭಾಗದಲ್ಲಿ ಮೂರು ಅಡಿಗಳಷ್ಟು ಕೊರೆತ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ರಸ್ತೆಯ ಮೇಲ್ಭಾಗದಲ್ಲಿ ಸಣ್ಣ ಬಿರುಕು ಕೂಡ ಕಾಣಿಸಿಕೊಂಡಿದೆ.
ಪ್ರಮುಖ ಘಾಟ್ ಮಾರ್ಗ:
ಕರಾವಳಿ ಮತ್ತು ಮದ್ಯಕರ್ನಾಟಕ ಸಂಪರ್ಕ ವ್ಯವಸ್ಥೆಯಲ್ಲಿ ಹುಲಿಕಲ್ ಘಾಟ್ ಪ್ರಮುಖ ಪಾತ್ರವಹಿಸಿದೆ. ಮಂಗಳೂರಿನಿಂದ ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿಗೆ ಈ ಮಾರ್ಗವೇ ಪ್ರಮುಖ ಕೊಂಡಿ. ಆಗುಂಬೆ, ಕೊಲ್ಲೂರು ಘಾಟ್ ಗಳು ಲಘು ವಾಹನಗಳಿಗೆ ಮಾತ್ರ ಸೀಮಿತವಾಗಿದ್ದು ಈ ಘಾಟ್ ಮಾರ್ಗದ ಮೇಲೆ ಹೆಚ್ಚಿನ ಒತ್ತಡವಿದೆ.
ರೂ.4.35 ಕೋಟಿ ಕಾಮಗಾರಿ:
ಹುಲಿಕಲ್ ಹೇರ್ ಪಿನ್ ತಿರುವಿನ ರಸ್ತೆ ಅಗಲೀಕರಣ, ತಡೆಗೋಡೆಯ ಮುಂದುವರಿದ ಕಾಮಗಾರಿಗೆ ಈಗಾಗಲೇ ರೂ.4.35 ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದೆ. ಆದರೆ ವರ್ಕ್ ಅಗ್ರಿಮೆಂಟ್ ಆಗಿಲ್ಲ. ಈಗ ಸುರಿಯುತ್ತಿರುವುದು ಅಕಾಲಿಕ ಮಳೆಯಾದರೂ ಈಗಾಗಲೇ ಮುಂಗಾರು ರಾಜ್ಯವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಕಾಮಗಾರಿ ನಡೆಸುವುದು ಕಷ್ಟ. ಇದು ಬಾರೀ ಗಂಡಾಂತರಕ್ಕೆ ಕಾರಣವಾಗಿದೆ.
ದೂರದೃಷ್ಟಿ ಇಲ್ಲದ ಕಾಮಗಾರಿ:
ಹುಲಿಕಲ್ ಘಾಟ್ ರಸ್ತೆ ಕಾಮಗಾರಿಗೆ ಕಳೆದ ಐದಾರು ವರ್ಷದಿಂದ ಕೋಟ್ಯಾಂತರ ರೂಪಾಯಿ ವ್ಯಯಿಸಲಾಗಿದೆ. ಆದರೆ ಸರಿಯಾದ ದೂರದೃಷ್ಟಿ ಇರದೆ ಮಳೆಗಾಲದಲ್ಲಿ ಅಪಾಯಕ್ಕೆ ತುತ್ತಾದ ಸಂದರ್ಭದಲ್ಲಿ ಮಾತ್ರ ಕಾಮಗಾರಿ ನಿಗಾ ವಹಿಸಲಾಗಿದೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಬಳಸಬಹುದಾದ ಫ್ಲಡ್ ಹಣವನ್ನು ಕೂಡ ಈ ಘಾಟಿ ರಸ್ತೆಗೆ ಹಾಕಲಾಗಿದೆ. ಆದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
HULIKAL GHAT..
Discover more from Prasarana news
Subscribe to get the latest posts sent to your email.
