
ಹೊಸನಗರ: ತಾಲ್ಲೂಕಿನ ಐತಿಹಾಸಿಕ ಸ್ಥಳವಾದ ಬಿದನೂರು ಕೋಟೆಯ ಒಳಭಾಗದಲ್ಲಿರುವ ಕೊಳದ ದಂಡೆ ಸಂಪೂರ್ಣ ಕುಸಿದು ಹೋದ ಘಟನೆ ನಡೆದಿದೆ. ತಾಲ್ಲೂಕಿನ ಬಿದನೂರು ಕೋಟೆಯ ಸುತ್ತ ಮುತ್ತ ಭಾನುವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದ್ದು ಕುಸಿತಕ್ಕೆ ಕಾರಣವಾಗಿದೆ.
ಬಿದನೂರು ಕೋಟೆಯ ಮಹಾಧ್ವಾರದಿಂದ ಒಳಗೆ ಹೋಗಿ ರಾಜದರ್ಬಾರ್ ಅಂಗಳಕ್ಕೆ ಹೋಗುವ ಮಾರ್ಗದ ಬಲಭಾಗದಲ್ಲಿ ಎರಡು ಕೊಳಗಳಿದ್ದು ಒಂದು ಕೊಳದ ದಂಡೆ ಸಂಪೂರ್ಣ ಕುಸಿತಕ್ಕೆ ಒಳಗಾಗಿದೆ.
ಈ ಕೊಳ ಬಹಳ ವರ್ಷಗಳ ಹಿಂದೆ ಕುಸಿತಕ್ಕೆ ಒಳಗಾಗಿದ್ದು ಕೆಂಪುಕಲ್ಲುಗಳಿಂದ ಅದೇ ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಈಗ ಅದೇ ಕೊಳದ ದಂಡೆ ಸಂಪೂರ್ಣ ಕುಸಿದು ಬಿದ್ದಿದೆ. ಕೊಳದ ಅಕ್ಕಪಕ್ಕ, ಕೊಳದ ದಂಡೆಯ ಮೇಲೆ ಗಿಡಗಂಟಿಗಳು ಬೆಳೆಯುತ್ತಿದ್ದು ಅದನ್ನು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಗಿಡಗಂಟಿ ಬೆಳೆದಿರುವುದು ಕುಸಿತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಿತಿನ್ ನಗರ ಆರೋಪಿಸಿದ್ದಾರೆ.
ಕೊಳಗಳು ಮಾತ್ರವಲ್ಲದೇ ಕೋಟೆಯ ಬೃಹತ್ ಗೋಡೆಗಳ ಮೇಲೂ ಗಿಡಗಳು ಬೆಳೆದು ಪೊದೆಗಳಾಗುತ್ತಿರುವ ಕಾರಣ ಅಲ್ಲಲ್ಲಿ ಗೋಡೆ ಕುಸಿತವೂ ಕಂಡು ಬಂದಿದೆ. ಸಂಬಂಧಪಟ್ಟ ಕೇಂದ್ರ ಪುರಾತತ್ವ ಇಲಾಖೆ ಸೂಕ್ತ ನಿರ್ವಹಣೆ ಮಾಡುವ ಮೂಲಕ ಐತಿಹಾಸಿಕ ಬಿದನೂರು ಕೋಟೆಯನ್ನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಅಲ್ಲದೇ ಇದೀಗ ಕುಸಿದಿರುವ ಕೊಳದ ದಂಡೆ ಮತ್ತು ಗೋಡೆಯನ್ನು ಸೂಕ್ತ ತಂತ್ರಜ್ಞಾನ ಬಳಸಿ ಇತಿಹಾಸದ ಮಾದರಿಯಲ್ಲೇ ಪುನಾನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
HOSANAGARA NEWS
Discover more from Prasarana news
Subscribe to get the latest posts sent to your email.
