
ಹೊಸನಗರ:ಮಾನವನಿಗೆ ಪರಿಸರವು ಅತ್ಯಮೂಲ್ಯ ಕೊಡುಗೆಯಾಗಿದೆ. ಇಂದು ಪರಿಸರವು ಮಾನವರಿಗೆ ನೀಡಿದ ಎಲ್ಲವನ್ನೂ ಗೌರವಿಸಲು ಮತ್ತು ಕೃತಜ್ಞರಾಗಿರಲು ಮತ್ತು ಅದನ್ನು ರಕ್ಷಿಸುವ ಪ್ರತಿಜ್ಞೆಯನ್ನು ಮಾಡಬೇಕು. ಪ್ರಕೃತಿಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ನಮಗೆ ನೆನಪಿಸಿಕೊಳ್ಳಬೇಕು. ಭೂಮಿಯ ಮೇಲಿನ ವಾತಾವರಣವನ್ನು ಕಲುಷಿತಗೊಳಿಸದಂತೆ ಉಳಿಸಲು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ಮತ್ತು ಪ್ರಪಂಚದಾದ್ಯಂತದ ಜನರನ್ನು ಈ ದಿಶೆಯಲ್ಲಿ ಪ್ರೇರೇಪಿಸಬೇಕು ಎಂದು ಪ್ರಸಕ್ತಸಾಲಿನ ಜೀವವೈವಿಧ್ಯ ಪ್ರಶಸ್ತಿ ಪುರಸ್ಕೃತ, ಜಲತಜ್ಞ ಚಕ್ರವಕ ಸುಬ್ರಹ್ಮಣ್ಯ ಹೇಳಿದರು.
ಕಾರಣಗಿರಿ ಸಿದ್ಧಿವಿನಾಯಕ ಸಭಾ ಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಇವರ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ 'ಪರಿಸರ ಗೀತ ನಮನ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರಾಸಕ್ತ ವಿನಾಯಕ ಪ್ರಭು ಮಾತನಾಡಿ ಹಿಂದೆಲ್ಲ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಬಂದಾಗ ನಕ್ಕ ನಾವು ಈಗ ಪ್ರತಿ ಹಳ್ಳಿಹಳ್ಳಿಯಲ್ಲೂ ಪ್ಲಾಸ್ಟಿಕ್ ಬಾಟಲಿಗಳು ಆವರಿಸಿಕೊಂಡಿದೆ. ಮುಂದೆ ಆಮ್ಲಜನಕವು ಸಿಲಿಂಡರ್ ರೂಪದಲ್ಲಿ ಬಂದರೆ ಅಚ್ಚರಿ ಏನಿಲ್ಲ. ಪರಿಸರ ದಿನ ಎಂದರೆ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ಪರಿಸರ ದಿನವೆಂದು ಆಚರಿಸೋಣ ಎಂದು ಅವರು ಹೇಳಿದರು.
ಇದೆ ಸಂದರ್ಭದಲ್ಲಿ ಕಲಾಭಾರತಿ ತಂಡದಿಂದ ಪರಿಸರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಗಾಯಕಿ ಗಾಯತ್ರಿ ಅರುಣ್, ಗಾಯಕ ಹೊಸನಗರದ ಸುರೇಶ, ಹನಿಯ ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು..
ENVIRONMENT SONG...
