
ಹೊಸನಗರ:ತಾಲೂಕಿನ 30 ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಇದೇ ತಿಂಗಳು ಮುಕ್ತಾಯವಾಗುತ್ತಿದ್ದು, ಈ ನಿಟ್ಟಿನಲ್ಲಿ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಭು ಲಿಂಗ ಕವಳಿಕಟ್ಟಿ ಅವರು, ಆಡಳಿತಾಧಿಕಾರಿ ನೇಮಕವಾದ ಗ್ರಾಮ ಪಂಚಾಯಿತಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯ ಅಧಿಕಾರದ ಅವಧಿ 2026ರ ಫೆಬ್ರವರಿ ಅಂತ್ಯದಲ್ಲಿ ಮುಕ್ತಾಯವಾಗಲಿದೆ. 2026–2031ರ ಅವಧಿಗಾಗಿ ಈ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಆಗುವವರೆಗೂ ಆಡಳಿತಾಧಿಕಾರಿ ನೇಮಿಸಲು ಜಿಲ್ಲಾಧಿಕಾರಿಯವರಿಗೆ ಅಧಿಕಾರವಿದೆ. ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಅನ್ವಯ ಈಗ ಆಡಳಿತಾಧಿಕಾರಿ ನೇಮಕವಾಗಿದೆ.

ಸರ್ಕಾರದ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನೇ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ, ಪಶು ಸಂಗೋಪನಾ ಇಲಾಖೆ, ನೀರಾವರಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಎಪಿಎಂಸಿ ಹಾಗೂ ಇತರೆ ಇಲಾಖೆ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದಾರೆ.

‘ಗ್ರಾಮ ಪಂಚಾಯಿತಿಯ ಎಲ್ಲ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಆಡಳಿತಾಧಿಕಾರಿಯವರು ನಿರ್ವಹಿಸತಕ್ಕದ್ದು. ಈ ಆದೇಶವು ಆಡಳಿತಾಧಿಕಾರಿಯು ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ಮುಂದಿನ 6 ತಿಂಗಳ ಅವಧಿಯವರೆಗೂ ಜಾರಿಯಲ್ಲಿರುತ್ತದೆ. ಅಥವಾ ಅಧ್ಯಕ್ಷರ ಚುನಾವಣೆ ನಡೆದು, ಗ್ರಾಮ ಪಂಚಾಯಿತಿಯು ಕ್ರಮಬದ್ಧವಾಗಿ ರಚನೆಯಾಗುವವರೆಗೂ ಆದೇಶ ಜಾರಿಯಲ್ಲಿರಲಿದೆ’ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.
D C ORDER .
Discover more from Prasarana news
Subscribe to get the latest posts sent to your email.
