
ಹೊಸನಗರ: ರೈತರ ಕೃಷಿ, ಕಾರ್ಯ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಸರಕಾರ ಪ್ರಸ್ತಾವಿತ ರೋಡ್ ನೆಟ್ ವರ್ಕ್ ಗ್ರಿಡ್ ಯೋಜನೆಯನ್ನು ಜಾರಿಗೊಳಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಕೃಷಿಕರ ಅಭಿಪ್ರಾಯ ಪಡೆದು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ವಸವೆ ಹಾಗು ಗೊರಗೋಡು ಗ್ರಾಮಸ್ಥರು ತಹಶೀಲ್ದಾರ್ ಕೆ.ಎನ್.ಭರತ್ ರಾಜ್ ಮೂಲಕ ಸರಕಾರಕ್ಕೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಕೃಷಿಕ ವಸವೆ ಪ್ರಶಾಂತ್ ಭಟ್ ಮಾತನಾಡಿ, ವಸವೆ ಮತ್ತು ಗೊರಗೋಡು ಗ್ರಾಮದಲ್ಲಿ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಸದರಿ ಯೋಜನೆ ಅನುಷ್ಠಾನದಿಂದ ಅವರ ಜೀವನೋಪಾಯದ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತ ಪಡಿಸಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮಸ್ಥರ ಯಾವುದೇ ವಿರೋಧವಿಲ್ಲ. ಆದರೆ, ಯೋಜನೆ ಅನುಷ್ಠಾನಕ್ಕೆ ಮುನ್ನ ಸಂಬಂಧಪಟ್ಟ ಅಧಿಕಾರಿ ವರ್ಗವು, ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕು. ರೈತರ ಕೃಷಿ ಭೂಮಿಯನ್ನು ಸಾಧ್ಯವಾದಷ್ಟು ಉಳಿಸುವ ನಿಟ್ಟಿನಲ್ಲಿ ಪರ್ಯಾಯ ರಸ್ತೆ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ರೈತರ ಕೃಷಿ ಜಮೀನಿಗೆ ಮತ್ತು ಜೀವನೋಪಾಯಕ್ಕೆ ಅನಗತ್ಯ ಹಾನಿಯಾಗದಂತೆ ಯೋಜನೆಯ ನಕ್ಷೆ ಮತ್ತು ರಸ್ತೆ ಮಾರ್ಗ ನಿರ್ಮಾಣಕ್ಕೆ ಮರು ಪರಿಶೀಲನೆ ಮಾಡಬೇಕು. ಕೃಷಿಕರ ಆಕ್ಷೇಪಣೆಗಳನ್ನು ಪರಿಗಣಿಸದೆ ಸರಕಾರ ಯೋಜನೆಗೆ ಅಂತಿಮ ಅನುಮೋದನೆ ನೀಡಬಾರದು. ಅಲ್ಲದೆ, ರೈತರ ಹಿತ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಅವರು ಒತ್ತಾಯಿಸಿದರು.
ಈ ವೇಳೆ ಕೃಷಿಕರಾದ ಚಂದ್ರಶೇಖರಗೌಡ, ತೋಟಪ್ಪ, ರೇವಣ್ಣ, ನಾಗರಾಜಗೌಡ, ಶಿವಪ್ಪ, ಉದಯ, ರಾಘವೇಂದ್ರ, ಸಂತೋಷ್, ಅಬ್ದುಲ್ ಸಲಂ, ರಾಜೇಶ್ ಮೊದಲಾದವರು ಇದ್ದರು.
ROOD NETWORK..
Discover more from Prasarana news
Subscribe to get the latest posts sent to your email.
