
ಹೊಸನಗರ: ಇತಿಹಾಸ ಬರೆಯುವಾಗ ಸಂಶೋಧನೆ ಮಾಡಿ ಬರೆಯಬೇಕು. ತಪ್ಪು ಮಾಹಿತಿ ಕೊಡುವುದು ಮುಂದಿನ ಜನಾಂಗಕ್ಕೆ ನಾವು ಮಾಡುವ ದ್ರೋಹ ಎಂದು ಡಾ. ಕೆ. ಜಿ. ವೆಂಕಟೇಶ್ ತಿಳಿಸಿದರು.
ತಾಲೂಕಿನ ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ
ಸಾಹಿತಿ ಅಂಬ್ರಯ್ಯ ಮಠ ಮತ್ತು ನಗರ ವಿನಾಯಕ ಉಡುಪರು ನೀಡಿದ್ದ ದತ್ತಿನಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೊಸನಗರ ತಾಲೂಕಿನ ಐತಿಹಾಸಿಕ ಸಾಧನೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಾಹಿತ್ಯ ಮತ್ತು ಇತಿಹಾಸ ಒಂದು ಅಸ್ತಿಪಂಜರಕ್ಕೆ ಮಾಂಸ, ಮಜ್ಜೆ ತುಂಬಿ ರೂಪ ಕೊಟ್ಟಂತೆ. ಸಾಹಿತ್ಯವಿಲ್ಲದೆ ಇತಿಹಾಸ ಬರೆಯೋದು ಒಂದು ಪ್ರಬಂಧವಾಗುತ್ತದೆ ಹೊರತು ಓದುಗರನ್ನು ಓದಿಸಿಕೊಂಡು ಹೋಗುವುದಿಲ್ಲ. ಸಾಹಿತ್ಯ ಬೆರೆತ ಇತಿಹಾಸ ಓದುಗರನ್ನು ಸೆಳೆದಿಡುವುದಲ್ಲದೆ ವಿಷಯವೂ ಸಹ ಅರ್ಥವಾಗುತ್ತದೆ ಎಂದು ತಿಳಿಸಿದರು.
ಒಂದು ಕಾಲಾವಧಿಯಲ್ಲಿ ಕೆಳದಿ ನಗರದ ಇತಿಹಾಸ ಅಂದು ರಾಜಧಾನಿಯಾಗಿ ಮೆರೆದಿದ್ದ ಬಿದನೂರು ನಗರವು ಇಂದು ಒಂದು ಅವಶೇಷದ ಕುರುಹು ಎಂಬಂತೆ ಉಳಿದಿದೆ ಎಂಬುದು ಈಗ ಇತಿಹಾಸ.
ಒಬ್ಬ ಬ್ರಿಟಿಷ್ ಅಧಿಕಾರಿ ಒಂದು ಸೊಳ್ಳೆ ಕಚ್ಚಿದ ಕಾರಣಕ್ಕೆ ನಗರವನ್ನು ಹೊಸನಗರಕ್ಕೆ ವರ್ಗಾವಣೆ ಮಾಡಿ ನಗರವನ್ನು ಎಲ್ಲ ರೀತಿಯಲ್ಲಿ ನಾಶಕ್ಕೆ ಕಾರಣನಾದ ಅನೇಕ ಸಂಗತಿಗಳ ಇತಿಹಾಸ ತಿಳಿಸುತ್ತದೆ ಎಂದರು.
ಈಗಲೂ ಸಹ ಬಿದನೂರಿನ (ನಗರ) ಸುತ್ತಮುತ್ತಲು ಸಣ್ಣಪುಟ್ಟ ದೊಡ್ಡ ಅಣೆಕಟ್ಟು ನಿರ್ಮಿಸುವ ಮೂಲಕ ಹೊಸನಗರ ತಾಲೂಕು ಅನಾಥವಾಗಿದೆ. ಕಡೆಗೂ ತನ್ನ ವಿಧಾನಸಭಾ ಕ್ಷೇತ್ರದ ಮಾನ್ಯತೆಯನ್ನೇ ಕಳೆದುಕೊಂಡು ಜನರ ಸಂಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂಬ ಕಟುಸತ್ಯ ನಮ್ಮೆಲ್ಲರ ಎದುರಿಗೆ ಇರುವ ಒಂದು ಇತಿಹಾಸವೇ ಎಂದರು.
ಇತಿಹಾಸ ಎಂಬುದೇ ಹೀಗೆ. ಅದು
ಯಾರ ಪರಿಧಿಗೂ ಸಿಗದೇ ಎಷ್ಟು ವಿಕೃತ, ವಿದ್ರೋಹಗಳ ನಡುವೆ ಅನೇಕ ಸಂಚುಗಳಿಗೆ ಲಕ್ಷಾಂತರ ಜನ ಬಲಿಯಾಗಿ ಕಡೆಗೆ ಅವಶೇಷದ ಹಾದಿ ಹಿಡಿಯುತ್ತದೆ ಎಂಬುದಕ್ಕೆ ನಗರವೇ ಸಾಕ್ಷಿಯಾಗಿದೆ ಎಂದರು.
ಸಾಹಿತಿ ಡಾ. ಶಾಂತರಾಮ ಪ್ರಭು ಮಾತನಾಡಿ, ಸಾಹಿತ್ಯವು ಕಥೆಯ ರೂಪದಲ್ಲಿದ್ದರೆ ಇತಿಹಾಸ ಕೇಳುವ ಮನಸ್ಸಿಗೂ ಹಿತ ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ದತ್ತಿದಾನಿ ಅಂಬ್ರಯ್ಯ ಮಠ ಮಾತನಾಡಿ, ಇತಿಹಾಸದ ಕಾದಂಬರಿ ಬರೆಯುವಾಗ ಎಷ್ಟು ಸಂಶೋಧನೆ ಮಾಡಿದರೂ ಸಹ ಪೂರ್ತಿ ಸತ್ಯವನ್ನು ಬರೆಯಲು ಹೆಣಗಾಡುವ ಒಂದು ಪ್ರಯತ್ನವಾಗುತ್ತದೆಯೇ ಹೊರತು ಸಂಪೂರ್ಣ ಸತ್ಯ ತಿಳಿಸುವ ಯಾವ ಇತಿಹಾಸವು ಇಲ್ಲ ಎಂಬ ಸಾಹಿತ್ಯದ ಅನುಭವ ಹಂಚಿಕೊಂಡರು.
ದತ್ತಿದಾನಿ ಮತ್ತಿಮನೆ ವಿನಾಯಕ ಉಡುಪ ಮಾತನಾಡಿ, ಬಿದನೂರು ಮತ್ತು ನಗರ ಉಡುಪ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಗಣೇಶ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಕೆ.ಎಸ್.ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಮಾರ್ಷಲ್ ಶರಾಂ, ಕಾರ್ಯದರ್ಶಿ ಕೆ.ಜಿ.ನಾಗೇಶ್, ಅಶ್ವಿನಿ ಪಂಡಿತ್, ಶಿವಾನಂದಪ್ಪ ಇತರರು ಇದ್ದರು.
ಮಾಲಾಶ್ರೀ ನಿರೂಪಿಸಿ,
ಸಂತೋಷ್ ಕುಮಾರ್ ಬಿ. ಎಂ. ಸ್ವಾಗತಿಸಿದರು. ಕು.ಸಿಂಧುಜಾ ಪ್ರಾರ್ಥಿಸಿ,
ಸುಮನಾ ಡಿ.ಎಸ್. ವಂದಿಸಿದರು.
KASAPA
Discover more from Prasarana news
Subscribe to get the latest posts sent to your email.
