
ಹೊಸನಗರ : ಸಾಮಾಜಿಕ ಜಾಗೃತಿ, ಸಮಾನ ಇಚ್ಚಾಶಕ್ತಿ ಹಾಗೂ ಪರಿಶುದ್ಧ ಮನಸ್ಸು ಇದ್ದಲ್ಲಿ ಮಾತ್ರ ಸಹಕಾರಿ ಸಂಸ್ಥೆ ಕಟ್ಟಿ ಬೆಳೆಸಲು ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಪಟ್ಟಣದ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ನೂತನ ಆಡಳಿತ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 75 ವರ್ಷದ ಸುಧೀರ್ಘ ಹಾದಿ ತುಳಿದು ಇಂದು ಸದೃಢ ಸಹಕಾರಿ ಸಂಘವಾಗಿ ಬೆಳೆದು ನಿಂತಿದೆ.
ಈ ಸಂಘ ಕ್ರಮಿಸಿದ ಹಾದಿ ಸುಗಮವಾಗಿರಲಿಲ್ಲ. ಸಂಘ ಬೆಳೆದು ಬಂದ ದಾರಿ ಸಹಕಾರಿ ವಲಯದಲ್ಲಿ ಮಾದರಿಯಾಗಿದೆ ಎಂದರು.
1998ರಲ್ಲಿ ಮೊದಲ ಬಾರಿಗೆ ಸಂಘದ ಕ್ರೇಡಿಟ್ ಕಾರ್ಡ್ ವಿತರಣೆ ಮಾಡಿದ್ದು ನಿಜವಾದ ಹೆಮ್ಮೆ ಎನಿಸಿದೆ. ರೈತರ ಆರ್ಥಿಕ ಸದೃಢತೆ ಸಹಕಾರಿ ಸಂಸ್ಥೆ ಆಶಾದಾಯಕವಾಗಿ ಕರ್ತವ್ಯ ನಿರ್ವಹಿಸುತ್ತಿವೆ.
ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಪ್ರಾಪ್ತಿಸಬೇಕು. ಆಗ ಸಂಘ ಉಳಿಯುತ್ತದೆ. ಹಾಗೆ ರೈತರು ಬೆಳೆಯುತ್ತಾರೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರೈತರಿಗೆ ಸಹಕಾರ ಕ್ಷೇತ್ರದಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.ಅಂದು ಅವರು ಸಹಕಾರ ವಲಯದಲ್ಲಿ ರೈತರಿಗೆ ಅನುಕೂಲ ಆಗಲೆಂದು ಈ
ದಿಟ್ಟ ಕ್ರಮ ಕೈಗೊಂಡರು.
ಅದರ ಫಲವಾಗಿ ರೈತರು ನೆಮ್ಮದಿಯ ಜೀವನ ಕಂಡರು. ಅವರ ಈ ನಿರ್ಧಾರ ಸಹಕಾರಿ ವಲಯದಲ್ಲಿ ಹೊಸ ಭಾಷ್ಯ ಬರೆಯಿತು. ಇಂದು ವಿಜ್ಞಾನ ಎಷ್ಟು ಮುಂದುವರೆದರೂ ಅನ್ನ ಕೊಡುವ ರೈತರ ಶ್ರಮ ಮರೆಯಲಾಗದು. ರೈತರ ಹಿತರಕ್ಷಣೆ ಸಂಘದ ಧ್ಯೇಯ ವಾಕ್ಯ ಆಗಬೇಕು ಎಂದು ಕರೆ ನೀಡಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ರೈತರು ಖಾಸಗಿ ಕ್ಷೇತ್ರದಲ್ಲಿ ವ್ಯವಹರಿಸದೇ ಸಹಕಾರಿ ಸಂಘಗಳ ಮೂಲಕ ವ್ಯವಹಾರ ಮಾಡಬೇಕು. ಆಗ ಮಾತ್ರ ಆರ್ಥಿಕ ಸದೃಢತೆ ಕಾಯ್ದುಕೊಳ್ಳಲು ಸಾಧ್ಯ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಇಂದು ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಸಹಕಾರಿ ಸಂಘಗಳು ಅಡಿಕೆ ಬೆಳೆಗಾರರ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿ.ಆರ್. ವಿನಯಕುಮಾರ್ ದುಮ್ಮಾ ವಹಿಸಿದ್ದು ಸಂಘ ಬೆಳೆದು ಬಂದ ದಾರಿಯನ್ನು ವಿವರಿಸಿದರು.
ಪ್ರಮುಖರಾದ ಅಫ್ ಕೋರ್ಸ್ ಅಧ್ಯಕ್ಷ ಇಂದೂಧರ ಗೌಡ, ಡಿಸಿಸಿ ನಿರ್ದೇಶಕ ವಿಜಯದೇವ್, ಜಿ.ಎನ್. ಸುಧೀರ್, ಎಂ. ಪರಮೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಮ್, ವಾಟಗೋಡು ಸುರೇಶ್ ಮತ್ತಿತರರು ಇದ್ದರು.
ನಿರ್ದೇಶಕ ರವಿ ಗುಬ್ಬಿಗ ಸ್ವಾಗತಿಸಿದರು. ಸಮನ್ವಯ ಕಾಶಿ ಹಾಗೂ ಅಶ್ವಿನಿ ನಿರೂಪಿಸಿದರು.
R M M..
Discover more from Prasarana news
Subscribe to get the latest posts sent to your email.
