
ಹೊಸನಗರ : ಇತ್ತೀಚೆಗೆ ನಿಧನರಾದ ತಾಲೂಕಿನ ಪಿರ್ಕಾಡ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ತಾಲೂಕು ವೀರಶೈವ ಸಮಾಜದ ಮಾಜಿ ಅಧ್ಯಕ್ಷ, ಹಿರಿಯ ರಾಜಕೀಯ ಮುತ್ಸದಿ ದಿವಂಗತ ಹುಣಸವಳ್ಳಿ ಚಂದ್ರಶೇಖರ್ (85) ಅವರಿಗೆ ಹೊಸನಗರ ವೀರಶೈವ ಕ್ರೀಡಾ ಸಮಿತಿ ಹಾಗೂ ಸಮಾಜದ ಯುವ ಮುಖಂಡರು ಒಗ್ಗೂಡಿ ಸಂತಾಪ ಸೂಚಿಸಿದರು.
ಈ ವೇಳೆ ಕಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದುಮ್ಮ ವಿನಯ್ ಕುಮಾರ್ ಮಾತನಾಡಿ, ಹುಣಸವಳ್ಳಿ ಚಂದ್ರಶೇಖರ್ ಅವರ ಬದುಕು, ನಡೆ-ನುಡಿ ಇಂದಿನ ಸಮಾಜದ ಯುವಕರಿಗೆ ಮಾದರಿ ಆಗಿದೆ. ಮೃತರು ವಿದ್ಯಾವಂತ ಪದವಿಧರಾಗಿದ್ದು 80ರ ದಶಕದಲ್ಲೇ ತಾಲೂಕು ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ, ಹಿಡಿತ ಸಾಧಿಸುವ ಮೂಲಕ ವೀರಶೈವ ಸಮಾಜಕ್ಕೆ ಆಸರೆಯಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಶಾಸಕರಾಗಿ ಆಯ್ಕೆ ಆಗಬಹುದಿತ್ತು. ಆದರೆ, ಎಲ್ಲಾ ವರ್ಗದ ಹಿತಕಾಪಾಡುವ ಮನಸ್ಸು ಹೊಂದಿದ್ದ ಅವರು ತಮಗೆ ದೊರೆತ ಹಲವು ಅವಕಾಶಗಳನ್ನು ತ್ಯಾಗ ಮಾಡುವ ಮೂಲಕ ಎಲ್ಲಾರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಸಾವು ಸಮಾಜಕ್ಕೆ ತುಂಬಲಾರದ ನಷ್ಟ ಎಂದರು.
ಹುಣಸವಳ್ಳಿ ಚಂದ್ರಶೇಖರ್ ಅವರದ್ದು ಮಾದರಿ ವ್ಯಕ್ತಿತ್ವ. ಯಾರನ್ನು ಏಕವಚನದಲ್ಲಿ ಸಂಬೋಧಿಸದ ಜೀವ ಅದು. ಎಲ್ಲರನ್ನು ಗೌರವದಿಂದ ಕಾಣುತ್ತಿದ್ದ ಅವರ ಸ್ವಭಾವ, ನಡೆ ಅನುಕರಣೀಯ ಎಂದು ಮುಂಬಾರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಾವಿನಕಟ್ಟೆ ಶಿವಾನಂದ ಮೆಚ್ಚುಗೆ ವ್ಯಕ್ತ ಪಡಿಸಿದರು.
ಇದೇ ವೇಳೆ ಸೇರಿದ್ದ ಸಮಾಜ ಬಾಂಧವರು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ವೀರಶೈವ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವರಕೋಡು ಈಶ್ವರಪ್ಪಗೌಡ, ವೀರಶೈವ ಕ್ರೀಡಾ ಸಮಿತಿ ಅಧ್ಯಕ್ಷ ಜಬಗೋಡು ಮಲ್ಲಿಕಾ, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜೆ.ಎನ್. ಪ್ರವೀಣ್, ಪ್ರಮುಖರಾದ ಸುನೀಲ್ ಪಟೋಡಿ, ಗಣೇಶ್ ಹೆಬೈಲು, ಸುಹಾಸ್ ಕಾಡವಳ್ಳಿ, ಕಿರಣ್ ಹಿಡುಲ್, ಶಿವು ದುಮ್ಮ, ಸಂತೋಷ ಕಚ್ಚಿಗೆ ಬೈಲು, ತಮ್ಮಣ್ಣ, ಪಟೋಡಿ ವಿಜಯ, ರಾಜಶೇಖರ ಕೊಗಟಿ, ಹೀಲಗೋಡು ಅಶೋಕ್ ಸೇರಿದಂತೆ ಹಲವರು ಸಂತಾಪ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
CONDOLENCE..
Discover more from Prasarana news
Subscribe to get the latest posts sent to your email.
