HIKING:ಕಸ್ತೂರಿರಂಗನ್ ವರದಿ ವಿರೋಧದ ಪಾದಯಾತ್ರೆ ಯಶಸ್ವಿ: ಪಕ್ಷಾತೀತ ನಡಿಗೆಗೆ ಭರ್ಜರಿ ಸ್ಪಂದನೆ..

ಹೊಸನಗರ: ಕಸ್ತೂರಿರಂಗನ್ ವರದಿ ವಿರೋಧದ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿದ್ದು ಪಾದಯಾತ್ರೆಯ ಪಕ್ಷಾತೀತ ನಡಿಗೆಗೆ ಭರ್ಜರಿ ಸ್ಪಂದನೆ ದೊರೆತಿದೆ. ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪಾದಯಾತ್ರೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ ರೈತರು, ಈ ಸಂಬಂಧ ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆದು ತಿದ್ದುಪಡಿ ತರುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು.
ತಾಲೂಕಿನ ಕಾರಣಗಿರಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆ ಅಧ್ಯಕ್ಷ ಆ‌ರ್. ಎಂ.ಮಂಜುನಾಥಗೌಡ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಎತ್ತಿನಗಾಡಿ ಏರಿ ಹೋರಾಟದ ಪೋಸ್ಟರ್ ಪ್ರದರ್ಶನ ಮಾಡುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡು 8 ಕಿ.ಮಿ. ಹೆಜ್ಜೆ ಹಾಕಿದರು. ಒಂದೆಡೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕಸ್ತೂರಿ ರಂಗನ್ ವರದಿ ವಿರುದ್ಧ ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು. ಪಾದಯಾತ್ರೆ ಬಳಿಕ ಹೊಸನಗರ ಮುಖ್ಯ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸುರಿಯುತ್ತಿರುವ ಮಳೆ ನಡುವೆಯೂ ಜನರು ಮತ್ತು ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಪಶ್ಚಿಮಘಟ್ಟ ಸಹಕಾರಿ ವೇದಿಕೆ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಹಂತ ಹಂತವಾಗಿ ಹೋರಾಟ ಹಮ್ಮಿಕೊಂಡಿದ್ದು ಪಾದಯಾತ್ರೆ, ಬೃಹತ್ ಸಾರ್ವಜನಿಕ ಸಭೆಗಳ ಮೂಲಕ ಕಸ್ತೂರಿ ರಂಗನ್ ವರದಿ ಸಾಧಕ-ಬಾಧಕಗಳು, ರೈತರು ಮತ್ತು ಸ್ಥಳೀಯ ನಿವಾಸಿಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು. ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಸುಲಭಗೊಳಿಸಲು ವೆಬ್‌ಸೈಟ್ ಸಿದ್ದಪಡಿಸಲಾಗಿದೆ. ಸಾರ್ವಜನಿಕರು ಅನ್ ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಸೆ.3ರಂದು ಸಾಗರ, ಸೆ.7ರಂದು ತೀರ್ಥಹಳ್ಳಿಯಲ್ಲಿ ಹೋರಾಟ ನಡೆಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಅಂತಿಮವಾಗಿ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಸುಮಾರು ಒಂದು ಲಕ್ಷ ಜನರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಆ ಕಾರ್ಯಕ್ರಮಕ್ಕೆ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ಆಹ್ವಾನಿಸಲಾಗುವುದು ಎಂದು ತಿಳಿಸಿದರು. ಶಾಸಕ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ ಆಯನೂರು ಮಂಜುನಾಥ್, ಬಿ.ಸ್ವಾಮಿರಾವ್, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಪ್ರಮುಖರಾದ ವಾಟಗೋಡು ಸುರೇಶ್, ಕಲಗೋಡು ರತ್ನಾಕರ್, ಬಿ.ಆರ್.ಜಯಂತ್, ಕೆ.ಎಸ್ .ಪ್ರಶಾಂತ್, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶ್ವೇತಾ ಬಂಡಿ, ತಾಲೂಕಿನ ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು, ವಕೀಲರ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

HIKING..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading