

ಹೊಸನಗರ: ಜಾತಿ ಹೆಸರಲ್ಲಿ ನಡೆಯುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ಹತ್ತಿಕ್ಕುವ ಕೆಲಸ ಆಗಬೇಕಾಗಿದೆ. ಸಾಹಿತ್ಯ ಪ್ರೇಮಿಗಳು ಸಮಾಜ ತಿದ್ದುವ ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ಮಾಜಿ ಸಚಿವ
ಕಿಮ್ಮನೆ ರತ್ನಾಕರ್ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಭಾನುವಾರ ನಡೆದ ಹೊಸನಗರ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ ಸಮುದಾಯದ ನೆಲೆಗಟ್ಟಿನಲ್ಲಿ ನಡೆಯುವ ಅಪರಾಧಗಳು ಹೆಚ್ಚು ಅಪಾಯಕಾರಿ ಆಗಿವೆ. ಸಮಾಜವನ್ನು ಇಂತಹ ಅಪರಾಧ ಕೃತ್ಯಗಳ ಕಪಿಮುಷ್ಠಿಯಿಂದ ಸಂರಕ್ಷಣೆ ಮಾಡುವ ಕಾಯಕ ನಡೆಯಬೇಕಿದೆ. ಸಮಾಜಘಾತುಕ ಶಕ್ತಿಯಿಂದ ಸಮಾಜವನ್ನು ಹೊರತರುವಲ್ಲಿ ಸಾಹಿತ್ಯ ವಲಯ ಪ್ರಯತ್ನಿಸಬೇಕು. ಯುವ ಸಮೂಹ
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದು ನಮ್ಮ ಮನಸ್ಸನ್ನು ಜಾಗೃತವಾಗಿಡುತ್ತವೆ. ನಾವು ನಮ್ಮ ಜ್ಞಾನವನ್ನು ಸದಾ ಅಭಿವೃದ್ಧಿ ಮಾಡಿಕೊಳ್ಳುತ್ತಿರಬೇಕು. ಚಿಂತನೆಗೆ ಒಳಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಇಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಗಳ ಆಯೋಜನೆಗೆ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡಬೇಕು. ಕನ್ನಡ ಬೆಳೆಸುವ ಕಾಯಕಕ್ಕೆ ಕೈ ಜೋಡಿಸಬೇಕು. ಸರ್ಕಾರದ ಯಾವುದೇ ಅನುದಾನ ಹಣ ಸಹಾಯ ನಿರೀಕ್ಷೆ ಮಾಡದೆ ಕನ್ನಡ ಕಟ್ಟುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಕಸಾಪ ಅಧ್ಯಕ್ಷ ಕೆ. ಗಣೇಶಮೂರ್ತಿ ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಆರ್. ಕೃಷ್ಣಮೂರ್ತಿ, ತ.ಮ. ನರಸಿಂಹ, ಮಂಜುನಾಥ ಕಾಮತ್, ಸಂಜೀವ ಶೆಟ್ಟಿ, ವಿಜೇಂದ್ರ ಶೇಟ್, ಇದ್ದರು.
ಪ್ರಧಾನ ಕಾರ್ಯದರ್ಶಿ ಕುಬೇಂದ್ರಪ್ಪ ಸ್ವಾಗತಿಸಿದರು. ಬಶೀರ್ ಅಹ್ಮದ್ ವಂದಿಸಿದರು. ಪತ್ರಕರ್ತೆ ಅಶ್ವಿನಿ ಪಂಡಿತ್ ನಿರೂಪಿಸಿದರು...
SAMMELANA..
Discover more from Prasarana news
Subscribe to get the latest posts sent to your email.