RIPPONPET NEWS: ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಬೇರೊಂದು ಇಲ್ಲ: ನ್ಯಾಯಮೂರ್ತಿ ಎಂ. ಎಸ್. ಸಂತೋಷ್..

ರಿಪ್ಪನ್ ಪೇಟೆ: "ಆತ್ಮಸಾಕ್ಷಿಗಿಂತ ಶ್ರೇಷ್ಠವಾದ ಸಾಕ್ಷ್ಯವೆಂದರೆ ಇನ್ನೊಂದು ಇಲ್ಲ" ಎಂದು ಹಿರಿಯ ವ್ಯವಹಾರಗಳ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಎಂ.ಎಸ್. ಸಂತೋಷ್ ಅವರು ಅಭಿಪ್ರಾಯಪಟ್ಟರು.

ಅವರು ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮತದಾರ ಸಾಕ್ಷರತಾ ಸಂಘ, ಹಾಗೂ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ "ಕಾನೂನು ಅರಿವು ಮತ್ತು ಸಂವಿಧಾನ ಪರಿಚಯ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮೌಲ್ಯಯುತ ಅರಿವು ನೀಡುವ ಉದ್ದೇಶದೊಂದಿಗೆ ಮಾತನಾಡಿದ ಅವರು, ಪರವಾನಿಗೆ ಇಲ್ಲದೇ ವಾಹನ ಚಾಲನೆ, ಸಾಮಾಜಿಕ ಮಾಧ್ಯಮದ ದುರುಪಯೋಗ, ಶ್ರದ್ಧಾಭಂಗಕರ ಅಭ್ಯಾಸಗಳು ಇವುಗಳು ಕಾನೂನುಬಾಹಿರ ಚಟುವಟಿಕೆಗಳಾಗಿದ್ದು, ಇವುಗಳಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

"ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ಅರಿತು, ಕಾನೂನು ಪಾಲನೆ ಮಾಡುವದರಲ್ಲಿ ನಂಬಿಕೆಯಿರಬೇಕು. ಸಮಾಜದಲ್ಲಿ ನೀತಿ ಮತ್ತು ನ್ಯಾಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ" ಎಂದು ಅವರು  ಹೇಳಿದರು.

ಕಾಲೇಜು ಪ್ರಾಂಶುಪಾಲ ಮಹಮ್ಮದ್ ನಜಹತ್ ಉಲ್ಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ,
"ಕಾನೂನು ಅರಿವು ಎಂಬುದು  ಜೀವಮಾನ ಪರ್ಯಂತ ಬೇಕಾಗುವ ಅರಿವಾಗಿದೆ. ವಿದ್ಯಾರ್ಥಿಗಳು ಕೇವಲ ಪಠ್ಯ ವಿಷಯಗಳಲ್ಲದೆ, ಸಂವಿಧಾನ ಮತ್ತು ಕಾನೂನು ಅರಿವಿನ ಮೂಲಕ ಉತ್ತಮ ನಾಗರಿಕರಾಗಬೇಕು. ಜ್ಞಾನವಂತಿಕೆ ಹಾಗೂ ಮೌಲ್ಯಾಧಾರಿತ ಬದುಕು ಇವು ಇಂದು ಹೆಚ್ಚು ಅವಶ್ಯಕ" ಎಂದು ಅವರು, ವಿದ್ಯಾರ್ಥಿಗಳು ಸಜ್ಜುಗೊಳ್ಳಬೇಕಾದ ನವ ಭಾರತ ನಿರ್ಮಾಣದಲ್ಲಿ ತಮ್ಮ ಪಾತ್ರ ಮಹತ್ತರ ಎಂಬ ಸಂದೇಶವನ್ನೂ ನೀಡಿದರು.

ತಾಲೂಕು ಕಸಾಪ ಅಧ್ಯಕ್ಷ ನಾಗರಕೊಡಿಗೆ ಗಣೇಶ್ ಮೂರ್ತಿ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ದಾರಿದೀಪದಂತೆ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಸಂವಿಧಾನ ಕುರಿತ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್  ಮಾಜಿ ಸದಸ್ಯ ಬಂಡಿ ರಾಮಚಂದ್ರ, ಎನ್ಎಸ್ಎಸ್ ಅಧಿಕಾರಿ ಹಾಲಪ್ಪ ಸಂಕೂರು, ಗ್ರಾಮಪಂಚಾಯಿತಿ ಅಧ್ಯಕ್ಷ ಸಚಿನ್ ಗೌಡ,  ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸೋಮಶೇಖರ ಟಿ.ಡಿ, ಪ್ರೌಢಶಾಲಾ ಮುಖ್ಯಶಿಕ್ಷಕಿ ಪ್ರಭಾವತಿ ಹೆಗಡೆ, ಕಸಾಪ ಕಾರ್ಯದರ್ಶಿ ಕೆ.ಜಿ. ನಾಗೇಶ್, ಅಶ್ವಿನಿ ಪಂಡಿತ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಹುಂಚ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಹೆಚ್.ಎಂ. ಬಷೀರ್ ಅಹಮ್ಮದ್ ಸ್ವಾಗತಿಸಿದರು.
ಫ್ರಾನ್ಸಿಸ್ ಬೆಂಜಮಿನ್ ನಿರೂಪಣೆ,ಶಂಕರಪ್ಪ ಕೆ.ಎಸ್. ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯಮೂರ್ತಿ ಎಂ.ಎಸ್. ಸಂತೋಷ್ ಅವರಿಗೆ ಕಸಾಪ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಗೌರವ ಸಮರ್ಪಣೆ ಸಲ್ಲಿಸಲಾಯಿತು.

RIPPONPET NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading