

ಹೊಸನಗರ: ಪಟ್ಟಣ ಪಂಚಾಯತ್ ವ್ಯಾಪ್ತಿಯ 45 ನಿವೇಶನಗಳು ಬಹಳಷ್ಟು ವರ್ಷಗಳಿಂದ ಮೂಲ ಮಾಲೀಕರ ಹೆಸರಿನಲ್ಲಿಯೇ ಇದ್ದು ಅವರಿಗೆ ಅದರ ಮಾಲೀಕತ್ವವನ್ನು ನೀಡಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಪತ್ರಿಕ ಹೇಳಿಕೆ ನೀಡಿರುವ ಅವರು
ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 2209 ನಿವೇಶನಗಳಿದ್ದು ಇವುಗಳಲ್ಲಿ 1300 ಮನೆಗಳು 909 ಖಾಲಿ ನಿವೇಶನಗಳು ಇರುತ್ತವೆ. ಇವುಗಳಲ್ಲೇ ಕೆಲವು ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ಅಂದರೆ ಪಕ್ಕಾ ಮುನ್ಸಿಪಲ್ ಖಾತೆಯಲ್ಲಿ ಮನೆಯನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇದು ಒಂದು ಕಡೆಯಾದರೆ ಇವುಗಳಲ್ಲಿ 45 ನಿವೇಶನಗಳು 1950ರಿಂದಲೂ ಮಾಲೀಕರ ಹೆಸರಿನಲ್ಲೇ ಇದ್ದು, ಅವರ ಮಾಲೀಕತ್ವದಲ್ಲೇ ಇದೆ ಎಂದು ಅಸೆಸ್‌ಮೆಂಟ್ ದಾಖಲೆಗಳಲ್ಲಿ ನಮೂದಾಗಿರುತ್ತದೆ ಆದರೆ 1980ರ ಅಸೆಸ್‌ಮೆಂಟ್‌ನಲ್ಲಿ ಏಕಾಏಕಿ ಮಾಲೀಕರನ್ನು ಅನುಭವದಾರರೆಂತಲೂ, ಈ ನಿವೇಶನಗಳು 'ಮುನ್ಸಿಪಲ್ ಖಾತೆ' ಎಂತಲೂ ನಮೂದಿಸಿರುತ್ತಾರೆ. ಹಲವಾರು ವರ್ಷಗಳಿಂದ ಈ ಬಗ್ಗೆ ಸಂಬಂಧಪಟ್ಟ 45 ಖಾತೆದಾರರು ಹಲವು బారి ಪಟ್ಟಣ ಪಂಚಾಯಿತಿಗೆ ಪರಿಶೀಲಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದರಿಂದ ನೊಂದ ಖಾತೆದಾರರು ಪಟ್ಟಣ ಪಂಚಾಯಿತಿಯ ಸದಸ್ಯರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ನಾವು ಕೂಲಂಕುಷವಾಗಿ ಪರಿಶೀಲಿಸಲಾಗಿ ಇಲ್ಲಿ ಕೈಬರಹದ ವ್ಯತ್ಯಾಸ ಮತ್ತು ಅಕ್ಷರಗಳ ಬಣ್ಣವೂ ವ್ಯತ್ಯಾಸವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದ್ದು, ಈ ಕೃತ್ಯವನ್ನು ಉದ್ದೇಶಪೂರ್ವಕವಾಗಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಿಷಯವನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರ ಗಮನಕ್ಕೆ ತಂದು ಚರ್ಚಿಸಲಾಗಿ ಅವರೂ ಕೂಡ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತು ಈ ವಿಷಯವನ್ನು ಬಗೆಹರಿಸುವಂತೆ ನಮಗೆ ಸೂಚಿಸಿರುತ್ತಾರೆ. ಮೊದಲ ಹಂತದಲ್ಲಿ ಎಲ್ಲಾ 45 ಖಾತೆದಾರರನ್ನು ಒಂದೆಡೆ ಸೇರಿಸಿ ಎಲ್ಲರಿಂದಲೂ ಮನವಿ ಮತ್ತು ಅವರಲ್ಲಿರುವ ಪೂರಕ ದಾಖಲೆಗಳನ್ನು ನೀಡಿ ಜಿಲ್ಲಾಧಿಕಾರಿಗಳಿಗೆ ಮುಖ್ಯಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವಂತೆ ನಾವು ತೀರ್ಮಾನಿಸಿ ಮನವಿಯನ್ನು ಸಲ್ಲಿಸಿರುತ್ತೇವೆ. ಮತ್ತು ಎಂಎಆರ್-19 ರಲ್ಲಿ ಖಾತೆದಾರರ ಹೆಸರೇ ನಮೂದಾಗಿದೆ ಮತ್ತು ಸರ್ಕಾರವು 1970-71ರಲ್ಲಿ ಖಾತಾ ಪುಸ್ತಕದಲ್ಲಿ ಯಾರ ಹೆಸರು ನಮೂದಿಸಿದೆಯೋ ಅವರನ್ನೇ ಮಾಲೀಕರು ಎಂದು ಹೇಳುವ ಬಗ್ಗೆ ಕಾನೂನನ್ನು ರೂಪಿಸಿರುತ್ತಾರೆ ಎಂಬುದನ್ನು ಈ ಮನವಿಯಲ್ಲಿಯೇ ತಿಳಿಸಲು ತೀರ್ಮಾನಿಸಿದ್ದೇವೆ.
ಖಾತೆದಾರರಿಗಾದ ಈ ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಿ ಈ ಬಗ್ಗೆ ತನಿಖೆ ನಡೆಸಿ ನೊಂದವರಿಗೆ ನ್ಯಾಯ ಕೊಡಿಸುವುದರ ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿಯನ್ನು ಮಾಡಿದ್ದಾರೆ.
ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀ ಅಶ್ವಿನಿ ಕುಮಾರ್ ಕೆ.ಕೆ ಹಾಗೂ ಶ್ರೀಮತಿ ಶಾಹಿನಾ ನಾಸೀರ್, ಕೆ ಎಸ್ ಗುರುರಾಜ್ ಆಶ್ರಯ ಸಮಿತಿ ಸದಸ್ಯ ಎಸ್.ಎ ನಾಸೀರ್, ಖಾತಾ ಹಕ್ಕು ಹೋರಾಟ ಸಮಿತಿಯ ಸದಸ್ಯರಾದ ರಾಧಾಕೃಷ್ಣ. ಎಸ್, ರಜಾಕ್, ನಾಗಪ್ಪ ಹಾಗೂ ಇತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
OWNERSHIP