

ಹೊಸನಗರ: ತಾಲೂಕಿನ ಹುಂಚ ಹೋಬಳಿ ವಸವೆ ಗ್ರಾಮದ ಸರ್ವೆ ನಂಬರ್ 17ರ ಬಂಜರು ಗೋಮಾಳ ಪ್ರದೇಶದಲ್ಲಿ ರೈತ ಶ್ರೀಧರ್ ಬಿನ್ ರಾಜಪ್ಪಗೌಡ ಎಂಬಾತ ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿ ಮಾಡಿ ಅಡಿಕೆ, ಬಾಳೆ ಕೃಷಿ ಮಾಡಿದ್ದು, ಈ ಭಾಗದ ಗ್ರಾಮ ಪಂಚಾಯತಿ ಸದಸ್ಯನೋರ್ವನ ದೂರಿನ ಮೇರೆಗೆ ತಾಲೂಕು ಆಡಳಿತ ನಿನ್ನೆ ಏಕಾಏಕಿ ಪೊಲೀಸ್ ಹಾಗು ಕಂದಾಯ ಇಲಾಖೆ ಸಿಬ್ಬಂದಿಗಳ ಸಮ್ಮುಖದಲ್ಲಿ ಹುಲುಸಾಗಿ ಬೆಳೆದಿದ್ದ ಅಡಿಕೆ, ಬಾಳೆ ಮರಗಳನ್ನು ಕಡಿದು, ಒತ್ತುವರಿ ತೆರವಿಗೆ ಮುಂದಾಗ ಕ್ರಮವನ್ನು ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿನ ತಹಶಿಲ್ದಾರ್ ಕಚೇರಿ ಎದುರು ತಹಶಿಲ್ದಾರ್ ವಿರುದ್ದ ಘೋಷಣೆ ಕೂಗಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಕೆಲಕಾಲ ಧರಣಿ ನಡೆಸಿದ ಪ್ರಸಂಗ ನಡೆಯಿತು.
ತಹಶಿಲ್ದಾರ್ ರಶ್ಮಿ ಅವರನ್ನು ಭೇಟಿ ಮಾಡಿದ ಡಿಎಸ್ ಎಸ್ ಸಂಚಾಲಕರು, ವಸವೆ ಗ್ರಾಮದ ಸರ್ವೆ ನಂಬರ್ 17ರಲ್ಲಿ 36.04 ಎಕರೆ ಸರ್ಕಾರಿ ಜಾಗವಿದ್ದು, ಸುಮಾರು ಎಳೆಂಟು ಮಂದಿ ಅಕ್ರಮ ಭೂ ಒತ್ತುವರಿ ಮಾಡಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ, ಕೇವಲ ಶ್ರೀಧರ್ ಎಂಬ ರೈತನ 4.02 ಎಕರೆ ಕೃಷಿ ಭೂಮಿ ತೆರವಿಗೆ ತಾಲೂಕು ಆಡಳಿತ ಏಕಾಏಕಿ ಮುಂದಾದ ಕ್ರಮದ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಈ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ಅಕ್ರಮ ತೆರವಿಗೆ ಗ್ರಾಮಸ್ಥರೇ ದೂರು ದಾಖಲಿಸಿದ್ದು, ಒತ್ತುವರಿ ತೆರವಿಗೆ ಆದೇಶ ನೀಡಿ ಹಲವು ತಿಂಗಳೇ ಸಂದಿದೆ. ಕೇವಲ ಶ್ರೀಧರ್ ಬಿನ್ ರಾಜಪ್ಪಗೌಡ ಎಂತ ರೈತನನ್ನೇ ತಾಲೂಕು ಆಡಳಿತ ಏಕೆ ಗುರಿಯಾಗಿಸಿದೆ..?!.ಕೂಡಲೇ ಎಲ್ಲಾ ಸರ್ಕಾರಿ ಭೂ ಒತ್ತುವರಿದಾರರನ್ನು ತೆರವುಗೊಳಿಸಲೇಬೇಕು ಎಂದು ಸಮಿತಿ ಒಕ್ಕೊರಳಿನಿಂದ ಆಗ್ರಹಿಸಿತು.
ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಶ್ರೀಧರ್ ಅವರ ಭೂ ಒತ್ತುವರಿ ತೆರವುಗೊಳಿಸಿದ್ದು, ಅಗತ್ಯ ದೂರು ಬಂದಲ್ಲಿ ಇದೇ ಸರ್ವೆ ನಂಬರಿನ ಅನಧಿಕೃತ ಒತ್ತುವರಿ ಸಹ ತೆರವಿಗೆ ಕ್ರಮಕೈಗೊಳ್ಳುವುದಾಗಿ ತಹಶಿಲ್ದಾರ್ ರಶ್ಮಿ ಪ್ರತಿಭಟನೆ ನಿರತರಿಗೆ ತಿಳಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಅರಮಡಿ ರಂಗಪ್ಪ, ತಾಲೂಕು ಸಂಚಾಲಕರಾದ ಗೇರುಪುರ ಅಣ್ಣಪ್ಪ, ಪ್ರಕಾಶ್, ಸಂತ್ರಸ್ತ ರೈತ ಶ್ರೀಧರ್, ವಿಠಲ್ ಗೌಡ ಮೊದಲಾದವರು ಇದ್ದರು.
DSS PROTEST...
Discover more from Prasarana news
Subscribe to get the latest posts sent to your email.